ಕಾರ್ಕಳ ಆನೆಕೆರೆಯಲ್ಲಿ ಎಸ್.ಕೆ.ಪಿ.ಎ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಕಾರ್ಕಳ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.), ದಕ್ಷಿಣ ಕನ್ನಡ–ಉಡುಪಿ ಜಿಲ್ಲೆ, ಕಾರ್ಕಳ ವಲಯದ ವತಿಯಿಂದ ಕಾರ್ಕಳ ಆನೆಕೆರೆಯಲ್ಲಿರುವ ಸದ್ಯೋಜಾತ ಪಾರ್ಕ್‌ನ ಎಸ್.ಕೆ.ಪಿ.ಎ ಧ್ವಜ ಕಟ್ಟೆಯಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ 80ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಕೆ.ಪಿ.ಎ ಕಾರ್ಕಳ ವಲಯದ ಅಧ್ಯಕ್ಷರಾದ ಪ್ರಮೋದ್ ಚಂದ್ರ ಪೈ ಅವರು ಸ್ವಾಗತಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೂಡುಬಿದ್ರೆ ವಲಯದ ಮಾಜಿ ಸೈನಿಕರ ವೇದಿಕೆಯ ಅಧ್ಯಕ್ಷ ವಿಜಯ್ ಫೆರ್ನಾಂಡಿಸ್ ಅವರು ಮಾತನಾಡಿ, ದೇಶದ 80ನೇ ಸ್ವಾತಂತ್ರ್ಯೋತ್ಸವದ ಮಹತ್ವ, ದೇಶದ ಪ್ರಜೆಗಳ ಜವಾಬ್ದಾರಿ ಹಾಗೂ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರಯೋಧರ ಸೇವೆಯನ್ನು ಸ್ಮರಿಸಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಮತ್ತು ಕೊಡುಗೆಗಳನ್ನು ಸ್ಮರಿಸುವುದರ ಜೊತೆಗೆ, ದೇಶದ ಏಕತೆ ಮತ್ತು ಪ್ರಗತಿಗಾಗಿ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಸ್ವಚ್ಛ ಭಾರತ್ ಬ್ರಿಗೇಡ್‌ನ ಮುಖ್ಯಸ್ಥ ಫೆಲಿಕ್ಸ್ ಹಾಗೂ ಸದಸ್ಯರು, ಎಸ್.ಕೆ.ಪಿ.ಎ ದಕ್ಷಿಣ ಕನ್ನಡ–ಉಡುಪಿ ಜಿಲ್ಲೆ ನಿಕಟಪೂರ್ವ ಅಧ್ಯಕ್ಷ ಪದ್ಮಪ್ರಸಾದ್ ಜೈನ್, ಜಿಲ್ಲಾ ಉಪಾಧ್ಯಕ್ಷ ದತ್ತಾತ್ರೇಯ ಹಿರಿಯಂಗಡಿ, ಕಾರ್ಕಳ ವಲಯದ ಸಲಹಾ ಸಮಿತಿ ಸದಸ್ಯರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಮಾಜಿ ಪುರಸಭಾ ಸದಸ್ಯ ಪ್ರಕಾಶ್ ರಾವ್ ಅವರು ಧನ್ಯವಾದ ಸಮರ್ಪಿಸಿದರು.ದೇಶಭಕ್ತಿ, ವೀರಯೋಧರ ಸ್ಮರಣೆ ಹಾಗೂ ಸಾಮಾಜಿಕ ಜವಾಬ್ದಾರಿಯ ಸಂದೇಶದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

Leave a Reply

Your email address will not be published. Required fields are marked *