ಕರ್ನಾಟಕ ಪಬ್ಲಿಕ್ ಸ್ಕೂಲ್ ಮುನಿಯಾಲಿನಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇದಿಕೆ ಉದ್ಘಾಟನೆ  ಹಾಗೂ ಗುರುನಮನಕಾರ್ಯಕ್ರಮ:

ಕರ್ನಾಟಕ ಪಬ್ಲಿಕ್ ಸ್ಕೂಲ್ ಮುನಿಯಾಲು ಇದರ 2025-26 ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆಗೈದ ಹಾಗೂ ಸಂಸ್ಥೆಯಲ್ಲಿ ಗರಿಷ್ಠ ಅಂಕಗಳಿಸಿದ ಸುಮಾರು 60 ವಿದ್ಯಾರ್ಥಿಗಳ ಮತ್ತು ‌ಎನ್ ಎಂ ಎಂ ಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಎಂಟು ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮವು ಮುನಿಯಾಲಿನ‌ ಶ್ರೀ ಪದ್ಮಾವತಿ ಕಲ್ಯಾಣ ಮಂದಿರದಲ್ಲಿ ನಡೆಯಿತು.‌

ವಿವಿಧ ವಿಷಯಗಳಲ್ಲಿ ಪೂರ್ಣ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.‌ಇದೇ ಸಂದರ್ಭದಲ್ಲಿ 2026-27ನೇ ಸಾಲಿನ ಶಾಲಾ ಕ್ರೀಡಾ ಹಾಗೂ ಸಾಂಸ್ಕೃತಿಕ ವೇದಿಕೆಯ ಉದ್ಘಾಟನೆಯನ್ನು ಸಹ ನೆರವೇರಿಸಲಾಯಿತು. ಸಂಸ್ಥೆಯಿಂದ ವರ್ಗಾವಣೆ ಗೊಂಡ ಪ್ರೌಢಶಾಲಾ ಶಿಕ್ಷಕರಾದ ಮಂಜುನಾಥ್ ಹಾಗೂ ಸುಧೀಂದ್ರ ಇವರಿಗೆ ಸಂಸ್ಥೆಯ ವತಿಯಿಂದ ಗೌರವಾರ್ಪಣೆ ಮಾಡಲಾಯಿತು.‌ ಇದೇ ಮಾಸಾಂತ್ಯದಲ್ಲಿ ನಿವೃತ್ತಿಗೊಳ್ಳಲಿರುವ ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಾರುತಿಯವರಿಗೂ ಇದೇ ಸಂದರ್ಭದಲ್ಲಿ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.

ಸಂಸ್ಥೆಯ ಪ್ರಾಂಶುಪಾಲರಾದ ಬೇಬಿ ಶೆಟ್ಟಿ ಕೆ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವನೆಗೈದರು.‌ ವಿದ್ಯಾರ್ಥಿ ಕ್ರೀಡಾ ಹಾಗೂ ಸಾಂಸ್ಕೃತಿಕ ವೇದಿಕೆಯನ್ನು ಉದ್ಘಾಟಿಸಿದ ಶೃಂಗೇರಿ ಶಾರದಾ ದೇವಾಲಯದ ಆಡಳಿತ ಮಂಡಳಿಯ ಅಧಿಕಾರಿ ಸತೀಶ್ ಭಟ್ ವಿದ್ಯಾರ್ಥಿ ಸಾಧಕರನ್ನು ಹಾಗೂ ಅವರಿಗೆ ಮಾರ್ಗದರ್ಶನ ನೀಡಿದ ಗುರುವೃಂದವನ್ನು ಮುಕ್ತ ಕಂಠದಿಂದ ಪ್ರಶಂಸಿಸಿ ಶಿಕ್ಷಣ ‌ಪ್ರಸಾರದಲ್ಲಿ ಶೃಂಗೇರಿ ಶಾರದಾ ಪೀಠವು ನಡೆಸುತ್ತಿರುವ ಸೇವಾ ಕಾರ್ಯಗಳ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಂ ಸಿ ಎಫ್ ಮಂಗಳೂರಿನ ಮಾರ್ಕೆಟಿಂಗ್ ವಿಭಾಗದ ಅಧಿಕಾರಿ ಕೀರ್ತನ್ ಕುಮಾರ್ ಗ್ರಾಮೀಣ ಪ್ರದೇಶದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುನಿಯಾಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಅತೀವ ಸಂತೋಷ ವ್ಯಕ್ತ ಪಡಿಸಿ ತಮ್ಮ ಸಂಸ್ಥೆಯ ವತಿಯಿಂದ ವಿದ್ಯಾಸಂಸ್ಥೆಗೆ ಸಾಧ್ಯವಿರುವ ಎಲ್ಲಾ ನೆರವನ್ನು ನೀಡುವ ಭರವಸೆ ನೀಡಿದರು.‌

ಉದಯ ಕೃಷ್ಣ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ವಿದ್ಯಾಭಿಮಾನಿ ಉದಯ ಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ ಕೆ ಪಿ ಎಸ್ ನ‌ ಅಭಿವೃದ್ಧಿಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು. ಮುಂಬೈನ ಯುವ ಉದ್ಯಮಿ ಹಾಗೂ ಸಂಸ್ಥೆಯ ಹಳೆ ವಿದ್ಯಾರ್ಥಿ ಗಿರೀಶ್ ಶೆಟ್ಟಿ ತೆಳ್ಳಾರು, ನಿವೃತ್ತ ಯೋಧ ಆನಂದ ಕಬ್ಬಿನಾಲೆ, ಸ್ಥಳೀಯ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಸುಧಾಕರ್, ಕೆ ಪಿ ಎಸ್ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಉಷಾ ಶೆಟ್ಟಿ,ಪದವಿಪೂರ್ವ ವಿಭಾಗದ ವಿದ್ಯಾರ್ಥಿ ನಾಯಕ ಪ್ರಣೀತ್ ಶೆಟ್ಟಿಗಾರ್, ಪ್ರೌಢಶಾಲಾ ವಿದ್ಯಾರ್ಥಿ ನಾಯಕ ಸಾಗರ್ ಶೆಟ್ಟಿ, ಪ್ರಾಥಮಿಕ ವಿಭಾಗದ ವಿದ್ಯಾರ್ಥಿ ನಾಯಕಿ ಸ್ತುತಿ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷ ಹರೀಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ರವೀಂದ್ರ ರಾವ್‌ ಧನ್ಯವಾದ ಅರ್ಪಣೆ ಮಾಡಿ ಶಿಕ್ಷಕ ಪ್ರಕಾಶ್ ಪೂಜಾರಿ ಕಾರ್ಯಕ್ರಮ ನಿರೂಪಣೆ ಮಾಡಿದರು

Leave a Reply

Your email address will not be published. Required fields are marked *