ಪಾಂಡೇಶ್ವರ ಗ್ರಂಥಾಲಯದಿಂದ ವಿಶಿಷ್ಟ ಪರಿಸರ ದಿನಾಚರಣೆ: ಗಿಡ ಬೆಳೆಸಿದ ಮಕ್ಕಳಿಗೆ ಬಹುಮಾನ!

ಪಾಂಡೇಶ್ವರ: ಇಲ್ಲಿನ ‘ಅರಿವು ಕೇಂದ್ರ’, ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಆಶ್ರಯದಲ್ಲಿ ಜೂನ್ 5ರ ವಿಶ್ವ ಪರಿಸರ ದಿನಾಚರಣೆಯನ್ನು ಪಾಂಡೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.ಗಿಡ ಸಾಕಿ ಪ್ರಶಸ್ತಿ ಗೆದ್ದ ವಿದ್ಯಾರ್ಥಿಗಳುಕಳೆದ ವರ್ಷದ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ನೀಡಲಾಗಿದ್ದ ಗಿಡಗಳನ್ನು ಅತ್ಯಂತ ಶ್ರದ್ಧೆಯಿಂದ ಪಾಲನೆ-ಪೋಷಣೆ ಮಾಡಿ ಬೆಳೆಸಿದ ತರಗತಿಯ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಕೇವಲ ಗಿಡ ನೆಡುವುದಷ್ಟೇ ಅಲ್ಲದೆ, ಅವುಗಳನ್ನು ಜವಾಬ್ದಾರಿಯಿಂದ ಬೆಳೆಸುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಬಹುಮಾನ ವಿತರಿಸಲಾಯಿತು.

ವಿದ್ಯಾರ್ಥಿಗಳಿಗೆ ಹೊಸ ಸವಾಲು!

ಮಕ್ಕಳಲ್ಲಿ ಗಿಡ ನೆಟ್ಟು ಬೆಳೆಸುವ ಮನೋಭಾವವನ್ನು ನಿರಂತರವಾಗಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಪಾಂಡೇಶ್ವರ ಗ್ರಂಥಾಲಯದ ಮೇಲ್ವಿಚಾರಕರು ಈ ಬಾರಿಯೂ ಒಂದು ವಿಶಿಷ್ಟ ಸ್ಪರ್ಧೆಯನ್ನು ಆಯೋಜಿಸಿದ್ದಾರೆ.ಸ್ಪರ್ಧೆಯ ವಿವರ: ಇಂದು ಸಂಜೆ ಮನೆಗೆ ತೆರಳಿದ ವಿದ್ಯಾರ್ಥಿಗಳು ತಮ್ಮ ತಾಯಿಯ ಜೊತೆಗೂಡಿ ಒಂದು ಗಿಡವನ್ನು ನೆಟ್ಟು, ಆ ಫೋಟೋವನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಮೊದಲು ಕಳುಹಿಸುವ ಮೊದಲ ಮೂರು ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು. ಅಷ್ಟೇ ಅಲ್ಲದೆ, ಈ ಗಿಡವನ್ನು ಒಂದು ವರ್ಷಗಳ ಕಾಲ ಚೆನ್ನಾಗಿ ಪಾಲನೆ ಮಾಡಿ, ಅದರ ಪ್ರಗತಿಯ ಫೋಟೋವನ್ನು ಮುಖ್ಯ ಶಿಕ್ಷಕರ ವಾಟ್ಸ್ ಆ್ಯಪ್ ನಂಬರ್‌ಗೆ ಕಳುಹಿಸಬೇಕಿರುತ್ತದೆ.

ಗಣ್ಯರ ಉಪಸ್ಥಿತಿಕಾರ್ಯಕ್ರಮದಲ್ಲಿ ಪಾಂಡೇಶ್ವರ ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯರಾದ ಕೃಷ್ಣ ಪೂಜಾರಿ, ಶಾಲಾ ಶಿಕ್ಷಕ ವೃಂದ, ಸಂಜೀವಿನಿ ಒಕ್ಕೂಟದ ಮುಖ್ಯ ಬರಹಗಾರರಾದ ಉಷಾ ಗಣೇಶ್ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಪರಿಸರ ಸಂರಕ್ಷಣೆಯ ಈ ಸಣ್ಣ ಮತ್ತು ಅರ್ಥಪೂರ್ಣ ಪ್ರಯತ್ನಕ್ಕೆ ಸಾಕ್ಷಿಯಾದರು.

Leave a Reply

Your email address will not be published. Required fields are marked *