ದಾವಣಗೆರೆಯಲ್ಲಿ ಅಕ್ಟೋಬರ್ ೧೧ರಂದು ನೃತ್ಯ ವಿದ್ಯಾಲಯ ಟ್ರಸ್ಟ್ನ ೫ನೇ ವಾರ್ಷಿಕೋತ್ಸವ “ನಾಟ್ಯಕ್ಷ – ೨೦೨೬”: ಸಾಂಸ್ಕೃತಿಕ ವೈಭವ ಮತ್ತು ಪ್ರಶಸ್ತಿ ಪ್ರದಾನ
ದಾವಣಗೆರೆ:
ಸ್ಥಳೀಯ ನೃತ್ಯ ವಿದ್ಯಾಲಯ ಟ್ರಸ್ಟ್ (ರಿ.) ಹಾಗೂ ಬಣ್ಣದ ಸಕ್ಕಟ್ಟು ಶ್ರೀ ಲಕ್ಷ್ಮೀನಾರಾಯಣಯ್ಯ ಜನ್ಮ ಶತಮಾನೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಸಂಸ್ಥೆಯ ೫ನೇ ವಾರ್ಷಿಕೋತ್ಸವದ ಅಂಗವಾಗಿ “ನಾಟ್ಯಕ್ಷ – ೨೦೨೬” (ನೃತ್ಯ • ಯಕ್ಷಗಾನ • ಸನ್ಮಾನ • ಸಂಸ್ಕೃತಿ) ಬೃಹತ್ ಸಾಂಸ್ಕೃತಿಕ ಸಮಾರಂಭವನ್ನು ದಿನಾಂಕ ೧೧-೧೦-೨೦೨೬ರ ಭಾನುವಾರ ಸಂಜೆ ೩:೦೦ ಗಂಟೆಗೆ ವಿದ್ಯಾನಗರ ರಸ್ತೆಯ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಉದ್ಘಾಟನೆ ಮತ್ತು ಗಣ್ಯರ ಉಪಸ್ಥಿತಿ:
ಕಾರ್ಯಕ್ರಮವನ್ನು ಹರಪನಹಳ್ಳಿ ಶಾಸಕರಾದ ಶ್ರೀಮತಿ ಶ್ರೀ ಲತಾ ಮಲ್ಲಿಕಾರ್ಜುನ ಅವರು ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ದಾವಣಗೆರೆ ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಶ್ರೀ ಬಿ. ವಾಮದೇವಪ್ಪ ತೊಗಲೇರಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜನಪ್ರಿಯ ಚಲನಚಿತ್ರ ನಟ ಶ್ರೀ ಅರ್ಜುನ್ ಅರುಣ್ (ಮಾಸ್ಟರ್ ಅರ್ಜುನ್, ಬೆಂಗಳೂರು), ವಿದ್ವಾಂಸರು ಹಾಗೂ ಖ್ಯಾತ ವಾಗ್ಮಿಗಳಾದ ಶ್ರೀ ಪವನ್ ಕಿರಣಕೆರೆ, ಚಳ್ಳಕೆರೆಯ ನೃತ್ಯನಿಕೇತನ ಶಾಸ್ತ್ರೀಯ ನೃತ್ಯ ಸಂಗೀತ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯು. ಎಸ್. ವಿಷ್ಣುಮೂರ್ತಿ ರಾವ್, ಯಕ್ಷರಂಗ ದಾವಣಗೆರೆ ಅಧ್ಯಕ್ಷರಾದ ಶ್ರೀ ಪ್ರಭಾಕರ್ ಶೆಟ್ಟಿ, ಮಾಗನೂರು ಬಸಪ್ಪ ಪಿ.ಯು. ಕಾಲೇಜಿನ ಮುಖ್ಯಸ್ಥರಾದ ಶ್ರೀ ಪ್ರಸಾದ್ ಬಂಗೇರ, ವಿಜಯ ಕರ್ನಾಟಕದ ಸ್ಥಾನಿಕ ಸಂಪಾದಕರಾದ ಶ್ರೀ ಸದಾನಂದ ಹೆಗಡೆ ಹಾಗೂ ನೃತ್ಯ ವಿದ್ಯಾಲಯ ಟ್ರಸ್ಟ್ನ ಗೌರವಾಧ್ಯಕ್ಷರಾದ ಶ್ರೀ ಶಂಕ್ರಯ್ಯ ವಾಡಿ ಉಪಸ್ಥಿತರಿರಲಿದ್ದಾರೆ.
ಇದೇ ಸಂದರ್ಭದಲ್ಲಿ ಮುಂಬೈ ನೃತ್ಯ ವಿದ್ಯಾಲಯದ ಗುರು ಶ್ರೀಮತಿ ಶೈಲಜಾ ಮಧುಸೂದನ್ ಅವರಿಗೆ ಗುರು ವಂದನೆ ಸಲ್ಲಿಸಲಾಗುವುದು. ಉಪನ್ಯಾಸಕರಾದ ಶ್ರೀ ಪ್ರದೀಪ್ ಕಾರಂತರು ಕಾರ್ಯಕ್ರಮ ನಿರ್ವಹಿಸಲಿದ್ದಾರೆ.
ಪ್ರಶಸ್ತಿ ಪುರಸ್ಕಾರ ಪ್ರದಾನ:
ಸಮಾರಂಭದಲ್ಲಿ ಇಬ್ಬರು ಸಾಧಕರಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು:
- ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀ ಕೆ. ರಾಘವೇಂದ್ರ ನಾಯರಿ ಅವರಿಗೆ ‘ಯಕ್ಷ ಲೋಕದ ಮಾಸದ ಬಣ್ಣ ೧೦೦ ಪ್ರಶಸ್ತಿ’.
- ಚಳ್ಳಕೆರೆಯ ಕರ್ನಾಟಕ ಕಲಾಶ್ರೀ ಗುರು ಶ್ರೀಮತಿ ಸುಧಾಮೂರ್ತಿ ಅವರಿಗೆ ‘ನಾಟ್ಯಕಲಾಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು:
ಸಭಾ ಕಾರ್ಯಕ್ರಮದ ಬಳಿಕ ವಿದುಷಿ ರಕ್ಷಾ ರಾಜಶೇಖರ್ ಅವರ ಶಿಷ್ಯವೃಂದದಿಂದ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಯಕ್ಷಗಾನ ಹಾಗೂ ವಿಶೇಷ ನೃತ್ಯಗಳ ರಂಗವೈಭವ ಪ್ರದರ್ಶನಗೊಳ್ಳಲಿದೆ.
ಕಲಾ ಪರಂಪರೆ ಮತ್ತು ಶತಮಾನೋತ್ಸವದ ಹೆಗ್ಗಳಿಕೆ: ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣ ಅವರ ಸಲಹೆಯಂತೆ, ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತ ಶ್ರೀ ಯು. ಎಸ್. ಕೃಷ್ಣ ರಾವ್ ಅವರಿಂದ ಸ್ಥಾಪಿತವಾದ ‘ನೃತ್ಯ ವಿದ್ಯಾಲಯ’ ಸಂಸ್ಥೆಯು ಮಂಗಳೂರು, ಬೆಂಗಳೂರು, ಮುಂಬೈಗಳಲ್ಲಿ ವಿಸ್ತಾರಗೊಂಡು, ಇಂದು ದಾವಣಗೆರೆಯಲ್ಲೂ ಕಲಾ ಕಂಪನ್ನು ಪಸರಿಸುತ್ತಿದೆ. ವಿದುಷಿ ರಕ್ಷಾ ರಾಜಶೇಖರ್ ಹಾಗೂ ಉದ್ಯಮಿ, ಕಲಾವಿದರಾದ ಶ್ರೀ ರಾಜಶೇಖರ ಎಂ. ಸಕ್ಕಟ್ಟು ಅವರ ನೇತೃತ್ವದಲ್ಲಿ ಸಂಸ್ಥೆಯು ವಾಣಿಜ್ಯ-ವಿದ್ಯಾನಗರಿ ದಾವಣಗೆರೆಯನ್ನು ಸಾಂಸ್ಕೃತಿಕ ನಗರಿಯನ್ನಾಗಿ ಬೆಳಗಿಸುತ್ತಿದೆ. ಜತೆಗೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನದ ಬಣ್ಣದ ವೇಷವನ್ನು ಬೆಳಗಿಸಿದ ಮಹಾನ್ ಕಲಾತಪಸ್ವಿ ಬಣ್ಣದ ಸಕ್ಕಟ್ಟು ಶ್ರೀ ಲಕ್ಷ್ಮೀನಾರಾಯಣಯ್ಯರ ಜನ್ಮಶತಮಾನೋತ್ಸವದ ಅಂಗವಾಗಿ ದೇಶ-ವಿದೇಶಗಳಲ್ಲಿ ೫೦ಕ್ಕೂ ಹೆಚ್ಚು ಯಕ್ಷಗಾನಗಳನ್ನು ನಡೆಸಿ, ೭೦ಕ್ಕೂ ಮಿಕ್ಕಿ ಕಲಾವಿದರನ್ನು ಸನ್ಮಾನಿಸಿರುವ ಹೆಗ್ಗಳಿಕೆ ಸಮಿತಿಯದ್ದಾಗಿದೆ.
ಕಲಾಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಅಧ್ಯಕ್ಷರಾದ ರಾಜಶೇಖರ ಎಂ. ಸಕ್ಕಟ್ಟು, ಸರ್ವ ಸದಸ್ಯರು ಹಾಗೂ ಪಾಲಕ-ಪೋಷಕರ ವೃಂದ ಪ್ರಕಟಣೆಯಲ್ಲಿ ಕೋರಿದ್ದಾರೆ.

