ದಾವಣಗೆರೆಯಲ್ಲಿ ಅದ್ಧೂರಿಯಾಗಿ ಜರುಗಿದ ‘ನಾಟ್ಯಕ್ಷ – 2026’ ಸಾಂಸ್ಕೃತಿಕ ಸಂಭ್ರಮ

ದಾವಣಗೆರೆ:
ಸ್ಥಳೀಯ ನೃತ್ಯ ವಿದ್ಯಾನಿಲಯ ಟ್ರಸ್ಟ್ (ರಿ.) ಹಾಗೂ ಬಣ್ಣದ ಸಕ್ಕಟ್ಟು ಶ್ರೀ ಲಕ್ಷ್ಮೀನಾರಾಯಣಯ್ಯ ಜನ್ಮ ಶತಮಾನೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ, 5ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ‘ನಾಟ್ಯಕ್ಷ – 2026’ (ನೃತ್ಯ, ಯಕ್ಷಗಾನ, ಸನ್ಮಾನ ಮತ್ತು ಸಂಸ್ಕೃತಿ) ಸಮಾರಂಭವು ನಗರದ ಕುವೆಂಪು ಕನ್ನಡ ಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.


ಉದ್ಘಾಟನೆ ಹಾಗೂ ಗಣ್ಯರ ನುಡಿ:
ಕಾರ್ಯಕ್ರಮವನ್ನು ಜನಪ್ರಿಯ ಚಲನಚಿತ್ರ ನಟ ಶ್ರೀ ಅರ್ಜುನ್ ಅರುಣ್ (ಮಾಸ್ಟರ್ ಅರ್ಜುನ್, ಬೆಂಗಳೂರು) ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಿ. ವಾಮದೇವಪ್ಪ ತೊಗಲೇರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿಯ ಖ್ಯಾತ ವಿದ್ವಾಂಸರು, ವಾಗ್ಮಿಗಳು ಹಾಗೂ ಯಕ್ಷಗಾನ ಪ್ರಸಂಗಕರ್ತರಾದ ಶ್ರೀ ಪವನ್ ಕಿರಣಕೆರೆ ಅವರು ಮಾತನಾಡಿ, “ಮಕ್ಕಳಲ್ಲಿರುವ ಮುಗ್ಧತೆ ಹಾಗೂ ಅವರ ನೃತ್ಯ-ಯಕ್ಷಗಾನ ಪ್ರದರ್ಶನಗಳನ್ನು ನೋಡಿದರೆ ನಮ್ಮ ಶ್ರೀಮಂತ ಸಂಸ್ಕೃತಿ ಮುಂದಿನ ಪೀಳಿಗೆಗೂ ನಿರಂತರವಾಗಿ ಪ್ರವಹಿಸುತ್ತದೆ ಎಂಬ ಭರವಸೆ ಮೂಡುತ್ತದೆ. ಈ ಸಂಸ್ಕೃತಿಯ ಕೊಂಡಿಯನ್ನು ಎಂದಿಗೂ ಕೈಬಿಡಬಾರದು,” ಎಂದು ಪ್ರೇರಣಾದಾಯಕ ಮಾತುಗಳನ್ನಾಡಿದರು.


ಮತ್ತೊಬ್ಬ ಮುಖ್ಯ ಅತಿಥಿ, ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ ಮುಖ್ಯಸ್ಥರಾದ ಶ್ರೀ ಪ್ರಸಾದ್ ಬಂಗೇರ ಮಾತನಾಡಿ, “ಸಾಂಸ್ಕೃತಿಕತೆಯ ಗಟ್ಟಿತನವು ನಮ್ಮಲ್ಲಿ ಮಾನವೀಯ ಮೌಲ್ಯಗಳನ್ನು ಸದಾ ಜಾಗೃತವಾಗಿರಿಸಿ, ಸಮಾಜಕ್ಕೆ ಸತ್ಪ್ರಜೆಗಳನ್ನು ಕೊಡುಗೆಯಾಗಿ ನೀಡುತ್ತದೆ,” ಎಂದು ಅಭಿಪ್ರಾಯಪಟ್ಟರು. ಚಳ್ಳಕೆರೆಯ ನೃತ್ಯನಿಕೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯು. ಎಸ್. ವಿಷ್ಣುಮೂರ್ತಿ ರಾವ್ ಮಾತನಾಡಿ, “ಇದೊಂದು ಅವಿಸ್ಮರಣೀಯ ಹಾಗೂ ಅರ್ಥಪೂರ್ಣ ದಿನ,” ಎಂದು ಶ್ಲಾಘಿಸಿದರು.

ವೇದಿಕೆಯಲ್ಲಿ ನೃತ್ಯ ವಿದ್ಯಾನಿಲಯ ಟ್ರಸ್ಟ್‌ನ ಗೌರವಾಧ್ಯಕ್ಷರಾದ ಶ್ರೀ ಶಂಕ್ರಯ್ಯ ವಾಡಿ ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ:
ಸಮಾರಂಭದಲ್ಲಿ ಮುಂಬೈನ ನೃತ್ಯ ವಿದ್ಯಾನಿಲಯದ ಗುರು ಶ್ರೀಮತಿ ಶೈಲಜಾ ಮಧುಸೂಧನ್ ಅವರಿಗೆ ‘ಗುರು ವಂದನೆ’ ಸಲ್ಲಿಸಲಾಯಿತು. ಚಳ್ಳಕೆರೆಯ ಕರ್ನಾಟಕ ಕಲಾಶ್ರೀ ಗುರು ಶ್ರೀಮತಿ ಸುಧಾಮೂರ್ತಿ ಅವರಿಗೆ ‘ನಾಟ್ಯಕಲಾಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.


ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ಕೆ. ರಾಘವೇಂದ್ರ ನಾಯರಿ ಅವರಿಗೆ ‘ಯಕ್ಷ ಲೋಕದ ಮಾಸದ ಬಣ್ಣ 100 ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, “ಇಂತಹ ದಂತಕತೆಯಂತಿರುವ ಮೇರು ನಟರ ಹೆಸರಿನ ಪ್ರಶಸ್ತಿ ಪಡೆದಿರುವುದು ಯಕ್ಷಗಾನ ಕಲೆಯನ್ನು ಕಲಿತದ್ದಕ್ಕೆ ಸಾರ್ಥಕ ಭಾವನೆ ತಂದಿದೆ,” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.


ಮನಸೂರೆಗೊಂಡ ಸಾಂಸ್ಕೃತಿಕ ವೈಭವ:
ಕಾರ್ಯಕ್ರಮದ ಅಂಗವಾಗಿ ಶ್ರೀಮತಿ ವಿದುಷಿ ರಕ್ಷಾ ರಾಜಶೇಖರ ಅವರ ಶಿಷ್ಯವೃಂದದಿಂದ ಪ್ರಸ್ತುತಪಡಿಸಲಾದ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಪೂರ್ವರಂಗ, ‘ಭಸ್ಮಾಸುರ ಮೋಹಿನಿ’ ಯಕ್ಷಗಾನ ಪ್ರಸಂಗ ಹಾಗೂ ವೈವಿಧ್ಯಮಯ ನೃತ್ಯ ಪ್ರದರ್ಶನಗಳು ಅತ್ಯಂತ ಶಿಸ್ತು ಮತ್ತು ಸುಂದರ ನೃತ್ಯ ಸಂಯೋಜನೆಯೊಂದಿಗೆ ಪ್ರೇಕ್ಷಕರ ಮನಸೆಳೆದವು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಜಶೇಖರ ಎಂ. ಸಕ್ಕಟ್ಟು, ಟ್ರಸ್ಟ್‌ನ ಸರ್ವ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಪಾಲಕ-ಪೋಷಕರು ಉಪಸ್ಥಿತರಿದ್ದು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *