ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ – ಪದ್ಮಪ್ರಸಾದ್‌ ಜೈನ್‌

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪ್ರತಿಯೊಬ್ಬರೂ ಪರಿಸರದ ಕುರಿತು ಕಾಳಜಿ ವಹಿಸುವುದು ಅವಶ್ಯ ಎಂದು ಎಸ್‌ಕೆಪಿಎ ನಿಕಟಪೂರ್ವ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್‌ ಜೈನ್‌ ಅಭಿಪ್ರಾಯಪಟ್ಟರು. ಅವರು ಜೂ. 10ರಂದು ಪಡುಕುಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಕೆಪಿಎ ಕಾರ್ಕಳ ವಲಯ ವತಿಯಿಂದ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರ ನಾಶದಿಂದ ವಾತಾವರಣದ ಮೇಲೆ ಭಾರಿ ಪರಿಣಾಮ ಬೀರುತ್ತಿದ್ದು ಹಮಾಮಾನ ವೈಪರೀತ್ಯವಾಗುತ್ತಿದೆ. ಜಾಗತಿಕ ತಾಪಮಾನ ಏರುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪರಿಸರದ ಕುರಿತು ವ್ಯಾಪಕ ಜಾಗೃತಿ ಅವಶ್ಯವೆಂದರು. ಪತ್ರಕರ್ತ ರಾಮಚಂದ್ರ ಬರೆಪ್ಪಾಡಿ ಮಾತನಾಡಿ, ಸೌತ್‌ ಕೆನರಾ ಫೋಟೋಗ್ರಾಫರ್‌ ಅಸೋಸಿಯೇಶನ್‌ ಕಾರ್ಕಳ ವಲಯವು ಕಳೆದ ಮೂರು ದಶಕಗಳಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ. ಈ ಮೂಲಕ ಅವಿಭಜಿತ ಜಿಲ್ಲೆಯ ಒಂದು ಆದರ್ಶ, ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿರುವುದು ಶ್ಲಾಘನೀಯ. ಪ್ರಮೋದ್‌ಚಂದ್ರ ಪೈ ಅವರು ಅಧ್ಯಕ್ಷರಾದ ಬಳಿಕ ಇಂತಹ ಕಾರ್ಯಗಳಿಗೆ ಮತ್ತಷ್ಟು ವೇಗ ದೊರಕಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್‌ಕೆಪಿಎ ಕಾರ್ಕಳ ವಲಯ ಅಧ್ಯಕ್ಷ ಪ್ರಮೋದ್‌ಚಂದ್ರ ಪೈ, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 126 ವಿವಿಧ ತಳಿಯ ಗಿಡಗಳನ್ನು ಶಾಲಾ ಆವರಣದಲ್ಲಿ ನೆಡಲಾಗುವುದು ಮತ್ತು ವಿದ್ಯಾರ್ಥಿ ಜೀವನದಲ್ಲೇ ಪರಿಸರದ ಕುರಿತು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಗಿಡ ವಿತರಣೆ ಮಾಡಲಾಗುವುದು ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ರವಿ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ, ಮುಖ್ಯಶಿಕ್ಷಕ ಹರೀಶ್‌ ಪೂಜಾರಿ, ಎಸ್‌ಕೆಪಿಎ ಜಿಲ್ಲಾ ಉಪಾಧ್ಯಕ್ಷ ದತ್ತಾತ್ರೇಯ ಹಿರಿಯಂಗಡಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀನಿವಾಸ್‌ ಆಚಾರ್ಯ, ಎಸ್‌ಡಿಎಂಸಿ ಉಪಾಧ್ಯಕ್ಷ ಹರೀಶ್‌ ಪೂಜಾರಿ ಶೇಖರ್ ಕುಕ್ಕುಜೆ ಪ್ರಧಾನ ಕಾರ್ಯದರ್ಶಿ ಎಸ್. ಕೆ. ಪಿ. ಎ ಕಾರ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಭಾವನಾ ಕಾರ್ಯಕ್ರಮ ನಿರೂಪಿಸಿ, ಸತೀಶ್‌ ವರಂಗ ವಂದಿಸಿದರು.

Leave a Reply

Your email address will not be published. Required fields are marked *