ಅರಣ್ಯ ಇಲಾಖೆಯು ಜನರ ಜೀವದ ಜೊತೆ ಚೆಲ್ಲಾಟ ಆಡುವುದನ್ನು ನಿಲ್ಲಿಸಬೇಕು: ಜನನಿ ದಿವಾಕರ ಶೆಟ್ಟಿ
ಹೆಬ್ರಿ: ಹೆಬ್ರಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಬೃಹತ್ ಮರಗಳು ರಸ್ತೆಗೆ ವಾಲಿಕೊಂಡು ಅನಾಹುತಗಳನ್ನು ಸೃಷ್ಟಿಸುತ್ತಿವೆ. ಈಗಾಗಲೇ ಸಾವು ಮತ್ತು ಹಲವಾರು ಅಫಘಾತಗಳು ಆಗಿವೆ. ಆದರೂ ಸಂಬಂಧಪಟ್ಟ ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿ ಕೆಲವೊಂದಿಷ್ಟು ಮರಗಳನ್ನು ಕಾಟಾಚಾರಕ್ಕೆ ಕಡಿದು ಕೈ ತೊಳೆದುಕೊಂಡಿದೆ ಎಂಬುದಾಗಿ ಉಡುಪಿ ಜಿಲ್ಲಾ ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಜನನಿ ದಿವಾಕರ ಶೆಟ್ಟಿಯವರು ಆರೋಪಿಸಿದ್ದಾರೆ.
ಅವರು ಇತ್ತೀಚೆಗೆ ಹೆಬ್ರಿಯಲ್ಲಿ ಅರಣ್ಯ ಇಲಾಖೆಯ ಬೇಜವಾಬ್ದಾರಿತನದಿಂದ ನಡೆದ ಸಾವಿನ ಪ್ರಕರಣಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅನಿಸಿಕೆಗಳನ್ನು ಹಂಚಿಕೊಂಡರು.
ಅರಣ್ಯ ಇರುವುದು ಜೀವ ಪ್ರಪಂಚದ ಉಳಿವಿಗಾಗಿ ಆದರೂ ಅದರಿಂದ ಮನುಷ್ಯನ ಜೀವಕ್ಕೆ ತೊಂದರೆ ಆಗುತ್ತಿದೆ ಎಂದಾಗ ಎಚ್ಚೆತ್ತುಕೊಳ್ಳಲೇ ಬೇಕು. ಪದೇ ಪದೇ ಮನವಿ ನೀಡಿದಾಗಲೂ ಕೂಡ ಅರಣ್ಯ ಇಲಾಖೆ ಜಾಣ ಮೌನ ತಾಳಿರುವುದು ಸಾರ್ವಜನಿಕರ ತಾಳ್ಮೆಯ ಕಟ್ಟೆಯನ್ನು ಒಡೆಯುವಂತೆ ಮಾಡಿದೆ. ಇದು ಇನ್ನಷ್ಟು ಕ್ರಾಂತಿ ರೂಪ ಪಡೆದುಕೊಳ್ಳುವ ಮುಂಚೆ ರಸ್ತೆ ಬದಿಗೆ ವಾಲಿಕೊಂಡ ಎಲ್ಲಾ ಮರಗಳನ್ನು ತೆರವುಗೊಳಿಸಿ ಜನರ ಜೀವ ಉಳಿಸಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.

