ಇಸ್ಲಾಂ ಆಧ್ಯಾತ್ಮಿಕ ಜೀವನದ ಜೊತೆಗೆ ದೈಹಿಕ ಆರೋಗ್ಯಕ್ಕೂ ವಿಶೇಷ ಮಹತ್ವ ನೀಡಿದೆ: ಕಲ್ಕಟ್ಟ ರಝ್ವಿ ಅಲ್ ಫುರ್ಖಾನಿ

ಉಡುಪಿ: ಮಾನವ ಜೀವನದಲ್ಲಿ ಆರೋಗ್ಯವು ಅಲ್ಲಾಹನು ನೀಡಿದ ಅಮೂಲ್ಯ ಅನುಗ್ರಹವಾಗಿದೆ. ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದು ಇಸ್ಲಾಮಿನಲ್ಲಿ ಮಹತ್ವದ ಕಾರ್ಯವಾಗಿದೆ. ಇಸ್ಲಾಂ ಆಧ್ಯಾತ್ಮಿಕ ಜೀವನದ ಜೊತೆಗೆ ದೈಹಿಕ ಆರೋಗ್ಯಕ್ಕೂ ವಿಶೇಷ ಮಹತ್ವ ನೀಡಿದೆ. ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮ ಅವರು ತಮ್ಮ ಜೀವನದಲ್ಲಿ ಆಚರಿಸಿ ತೋರಿಸಿದ ಹಾಗೂ ಪ್ರೋತ್ಸಾಹಿಸಿದ ಚಿಕಿತ್ಸಾ ವಿಧಾನಗಳಲ್ಲಿ ಹಿಜಾಮ ಪ್ರಮುಖವಾದುದು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮ ಅವರು ಸ್ವತಃ ಹಿಜಾಮ ಚಿಕಿತ್ಸೆ ಮಾಡಿಸಿಕೊಂಡಿದ್ದು, ಉಮ್ಮತ್ತಿಗೂ ಅದರ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಆದರೆ, ಈ ಚಿಕಿತ್ಸೆಯನ್ನು ಸೂಕ್ತ ತರಬೇತಿ ಪಡೆದ ತಜ್ಞರಿಂದ ಸುರಕ್ಷಿತವಾಗಿ ಪಡೆಯುವುದು ಅಗತ್ಯ ಎಂದು ರಾಜ್ಯ ಎಸ್‌ವೈಎಸ್ ಉಪಾಧ್ಯಕ್ಷ ಹಾಗೂ ಸುನ್ನೀ ಕೋ-ಆರ್ಡಿನೇಷನ್ ಜಿಲ್ಲಾಧ್ಯಕ್ಷ ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಅಲ್ ಫುರ್ಖಾನಿ ಕಲ್ಕಟ್ಟ ಹೇಳಿದರು.

ರಾಜ್ಯ ಎಸ್‌ವೈಎಸ್ ನಿರ್ದೇಶನದಂತೆ ಉಡುಪಿ ಅಂಜುಮನ್ ಮಸೀದಿ ಸಭಾಂಗಣದಲ್ಲಿ ನಡೆದ ಉಡುಪಿ ಝೋನ್ ಹಿಜಾಮ ಕ್ಯಾಂಪ್ ಉದ್ಘಾಟಿಸಿ ಅವರು ಮಾತನಾಡಿದರು. ಹಿಜಾಮವು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮ ಅವರಿಂದ ಪ್ರೋತ್ಸಾಹಿಸಲ್ಪಟ್ಟ ಸುನ್ನತ್ ಚಿಕಿತ್ಸಾ ಪದ್ಧತಿಯಾಗಿದ್ದು, ಅದರ ಧಾರ್ಮಿಕ ಮಹತ್ವದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಝೋನ್ ಅಧ್ಯಕ್ಷ ಅಬ್ದುರ್ರಶೀದ್ ರಝ್ವಿ ಕಟಪಾಡಿ ಅವರ ನೇತೃತ್ವದಲ್ಲಿ ನಡೆದ ಕ್ಯಾಂಪ್‌ನಲ್ಲಿ ಡಾ. ಮುಹಮ್ಮದ್ ಫಾರೂಕ್ ಉಪ್ಪಿನಂಗಡಿ ಅವರು ಹಿಜಾಮ ಚಿಕಿತ್ಸೆಯ ಮಹತ್ವ ಹಾಗೂ ಅನಿವಾರ್ಯತೆಯ ಕುರಿತು ಮಾಹಿತಿ ನೀಡಿದರು. ಮೌಲಾನ ಮೌಲಾ ಅಲಿ ಅಂಜುಮನ್ ಅವರು ಶುಭ ಹಾರೈಸಿದರು.

ಹನೀಫ್ ಹಾಜಿ ಅಂಬಾಗಿಲು, ಅಬ್ದುಲ್ ವಹೀದ್ ಅಂಜುಮನ್, ಅನ್ವರ್ ಕಟಪಾಡಿ, ಸಿದ್ದೀಕ್ ಅಂಬಾಗಿಲು, ಮುಸ್ತಫಾ ಉಪ್ಪಿನಂಗಡಿ, ಅಬ್ದುಸ್ಸತ್ತಾರ್ ಉಡುಪಿ ಮುಂತಾದವರು ಉಪಸ್ಥಿತರಿದ್ದರು.

ಝೋನ್ ಕಾರ್ಯದರ್ಶಿ ತೌಫಿಕ್ ಅಂಬಾಗಿಲು ಸ್ವಾಗತಿಸಿದರು. ನಾಸಿರ್ ಭದ್ರಗಿರಿ ವಂದಿಸಿದರು.

Leave a Reply

Your email address will not be published. Required fields are marked *