ಯಕ್ಷಗಾನ ಮತ್ತು ಭರತನಾಟ್ಯ ಕಲೆಯಲ್ಲಿ ಪ್ರತಿಭೆ ಮೆರೆದ ಮಾನ್ಯ ಜಿ. ಭಂಡಾರಿ ಅವರಿಗೆ ಅಭಿನಂದನೆಗಳು

ಕರಾವಳಿಯ ಹೆಮ್ಮೆಯ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಹಿರಿಯ ಕಲಾವಿದರ ಜೊತೆಗೆ ಯುವ ಪ್ರತಿಭೆಗಳ ಕೊಡುಗೆಯೂ ಮಹತ್ವದ್ದಾಗಿದೆ. ಅಂತಹ ಯುವ ಪ್ರತಿಭೆಗಳಲ್ಲಿ ಮಾನ್ಯ ಜಿ. ಭಂಡಾರಿ ಅವರು ಒಬ್ಬರು. ತಂದೆಯವರ ಕಲಾಸಕ್ತಿಯ ಪ್ರೇರಣೆಯೊಂದಿಗೆ ವಿದ್ಯಾಭ್ಯಾಸದ ಜೊತೆಗೆ ಯಕ್ಷಗಾನ, ಭರತನಾಟ್ಯ ಹಾಗೂ ಮದ್ದಳೆ ವಾದನದಲ್ಲಿ ಆಸಕ್ತಿ ಬೆಳೆಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಬನ್ನಂಜೆ ಗೋವಿಂದ ಭಂಡಾರಿ ಮತ್ತು ಶಿಕ್ಷಕಿ ವಾಣಿಶ್ರೀ ಅಮ್ಮುಂಜೆ ದಂಪತಿಯ ಪುತ್ರಿಯಾದ ಮಾನ್ಯ ಜಿ. ಭಂಡಾರಿ ಅವರು ಪ್ರಸ್ತುತ ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಸ್ಕೂಲ್‌ನಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. *ಇವರ ತಂದೆ ಬನ್ನಂಜೆ ಗೋವಿಂದ ಭಂಡಾರಿ ಅವರೂ ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದು, ಕುಟುಂಬದಲ್ಲಿಯೇ ಕಲೆಯ ಬಗ್ಗೆ ಒಲವು ಮತ್ತು ಆಸಕ್ತಿಯ ವಾತಾವರಣವಿದೆ.*ಯಕ್ಷಗಾನ ಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪುಂಡುವೇಷ ಸೇರಿದಂತೆ ವಿವಿಧ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾ ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ.

ಅಂಬಲಪಾಡಿಯ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಮಂಡಳಿಯ ಮಕ್ಕಳ ಮೇಳದಲ್ಲಿ ಪ್ರಧಾನ ವೇಷಧಾರಿಯಾಗಿ ಗುರುತಿಸಿಕೊಂಡಿದ್ದಾರೆ.*2024ರಲ್ಲಿ ಮಂಗಳೂರಿನ ಟೌನ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಟ್ಲ ಫೌಂಡೇಶನ್ ವತಿಯಿಂದ ಯಕ್ಷಗಾನ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿಯನ್ನು ಸ್ವೀಕರಿಸಿರುವುದು ಇವರ ಸಾಧನೆಯ ಪ್ರಮುಖ ಮೈಲಿಗಲ್ಲಾಗಿದೆ.*ಯಕ್ಷಗಾನದಲ್ಲಿ ಗುರುಗಳಾದ ನರಸಿಂಹ ತುಂಗಾ ಕೋಟ ಅವರಿಂದ ತರಬೇತಿ ಪಡೆಯುತ್ತಿರುವ ಇವರು, ಭರತನಾಟ್ಯದಲ್ಲಿಯೂ ವಿದ್ವಾನ್ ಸುಧೀರ್ ರಾವ್ ಕೊಡೂರು ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಜೊತೆಗೆ, ಎಂ.ಜಿ.ಎಂ. ಕಾಲೇಜಿನ ಯಕ್ಷಗಾನ ಕಲಾ ಕೇಂದ್ರದಲ್ಲಿ ಗುರುಗಳಾದ ಕೃಷ್ಣಮೂರ್ತಿ ಭಟ್ ಬಗ್ವಾಡಿ ಅವರಿಂದ ಮದ್ದಳೆ ವಾದನದ ತರಬೇತಿಯನ್ನು ಪಡೆಯುತ್ತಿದ್ದಾರೆ. ಹೀಗೆ ಯಕ್ಷಗಾನದ ಪಾತ್ರಾಭಿನಯ, ಹಿಮ್ಮೇಳ ಮತ್ತು ಭರತನಾಟ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಇವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ.ವಿದ್ಯಾಭ್ಯಾಸದ ಜೊತೆಗೆ ವಿವಿಧ ಕಲಾಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಾನ್ಯ ಜಿ. ಭಂಡಾರಿ ಅವರು ಮುಂದಿನ ದಿನಗಳಲ್ಲಿ ಯಕ್ಷಗಾನ ಮತ್ತು ಇತರ ಕಲಾಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿ.

ತಂದೆಯವರ ಕಲಾಸಕ್ತಿಯ ಪರಂಪರೆಯನ್ನು ಮುಂದುವರಿಸುತ್ತಾ, ತಮ್ಮ ಪ್ರತಿಭೆಯ ಮೂಲಕ ನಾಡಿನ ಕೀರ್ತಿಯನ್ನು ಹೆಚ್ಚಿಸಲಿ ಹಾಗೂ ಯುವಜನತೆಗೆ ಸ್ಫೂರ್ತಿಯಾಗಲಿ ಎಂದು ಹಾರೈಸುತ್ತೇವೆ.*ಇವರಿಗೆ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಮತ್ತು ಭಂಡಾರಿ ಮಹಾಮಂಡಲ (ರಿ.) ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಕೆಗಳು.*

Leave a Reply

Your email address will not be published. Required fields are marked *