ಪಿ ಯು ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ಸ್ಥಾನಪಲ್ಲಟಗೊಳಿಸುವ ಸರ್ಕಾರದ ಕ್ರಮ – ಜುಲೈ ಮೊದಲ ವಾರದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಧರಣಿ
9 ಮತ್ತು 10 ನೇ ತರಗತಿಗಳಿಗೆ ಪಾಠ ಬೋಧಿಸಲು ಪಿ ಯು ಉಪನ್ಯಾಸಕರನ್ನು ನಿಯೋಜಿಸುವ ಉದ್ದೇಶದಿಂದ ಸರ್ಕಾರ ಹೊರಡಿಸಿರುವ ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ)(ನೇಮಕಾತಿ)(ತಿದ್ದುಪಡಿ) ಕರಡು ನಿಯಮಗಳು -2026 ಇದು ರಾಜ್ಯದ 10,000 ಕ್ಕೂ ಹೆಚ್ಚು ಸರ್ಕಾರಿ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ಕಳುಹಿಸುವ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ಕ್ರಮದ ಮೂಲ ಆಶಯಗಳಿಗೆ ವಿರುದ್ಧವಾಗಿ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಉಪನ್ಯಾಸಕರ ಸಂಘ ತೀವ್ರವಾಗಿ ಖಂಡಿಸಿದೆ.
ಶಿಕ್ಷಣ ತಜ್ಞರು, ಶಿಕ್ಷಕರನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಹಾಗೂ ಉಪನ್ಯಾಸಕರ ಸಂಘದ ಒಟ್ಟಿಗೆ ಸಮಾಲೋಚಿಸದೇ ಏಕಪಕ್ಷೀಯವಾಗಿ ಪ್ರಕಟಿಸಿರುವುದು ಪ್ರಜಾಸತ್ತಾತ್ಮಕ ಲಕ್ಷಣವಲ್ಲ. ಎಲ್ಲಾ ಇಲಾಖೆಗಳಲ್ಲಿ ಮುಂಬಡ್ತಿ ನೀಡಿದರೆ ರಾಜ್ಯದ ಪಿ ಯು ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ಕಳುಹಿಸುವ ನಿರ್ಧಾರದೊಂದಿಗೆ ಹಿಂಬಡ್ತಿ ನೀಡಲಾಗುತ್ತಿದೆ. ಇದನ್ನು ಉಡುಪಿ ಜಿಲ್ಲೆಯ ಉಪನ್ಯಾಸಕರುಗಳು ಬಲವಾಗಿ ಖಂಡಿಸುತ್ತೇವೆ ಎಂದು ಜಿಲ್ಲಾಧ್ಯಕ್ಷರಾದ ಶ್ರೀ ಸುಧೀರ್ ಪ್ರಭು ಹಾಗೂ ಜಿಲ್ಲಾ ಪದಾಧಿಕಾರಿಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

