ಹೆಬ್ರಿ ಸಂತೆಕಟ್ಟೆಯಲ್ಲಿ 2096ನೇ ಮದ್ಯವರ್ಜನ ಶಿಬಿರ ಯಶಸ್ವಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ) ಹೆಬ್ರಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ, ಉಡುಪಿ ಜಿಲ್ಲೆ ಮತ್ತು ಹೆಬ್ರಿ ತಾಲೂಕು ಘಟಕ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ದೇರಳಕಟ್ಟೆ (ಕ್ಷೇಮ), ಪ್ರಾಥಮಿಕ ಆರೋಗ್ಯ ಕೇಂದ್ರ ಕರ್ಜೆ, ಆರಕ್ಷಕ ಠಾಣೆ ಹೆಬ್ರಿ, ಗ್ರಾಮ ಪಂಚಾಯಿತಿ 38ನೇ ಕಳ್ತೂರು, ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಕೊಕ್ಕರ್ಣೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು ಚೇರ್ಕಾಡಿ ವಲಯ, ಶೌರ್ಯ ವಿಪತ್ತು ನಿರ್ವಹಣಾ ಸಮಿತಿ, ತಾಲೂಕು ಭಜನಾ ಪರಿಷತ್, ನವಜೀವನ ಸಮಿತಿ ಹೆಬ್ರಿ ತಾಲೂಕು, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಉಜಿರೆ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ 2096ನೇ ಮದ್ಯವರ್ಜನ ಶಿಬಿರವು ಹೆಬ್ರಿ ತಾಲೂಕಿನ ಸಂತೆಕಟ್ಟೆಯ ಶ್ರೀ ಗಣೇಶ ಮಂದಿರದಲ್ಲಿ ಇಂದು ಜರುಗಿತು.

ಕಾರ್ಯಕ್ರಮವನ್ನು ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ) ಹೆಬ್ರಿ ತಾಲೂಕು ಅಧ್ಯಕ್ಷರಾದ ಶ್ರೀ ವಾದಿರಾಜ ಶೆಟ್ಟಿ ಅವರು ವಹಿಸಿದ್ದರು.

ಅಧ್ಯಕ್ಷರ ಮಾತು: ಅಧ್ಯಕ್ಷತೆ ವಹಿಸಿ ಮಾತನಾಡಿದ ವಾದಿರಾಜ ಶೆಟ್ಟಿ ಅವರು, “ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯಿಂದ ಆರಂಭವಾದ ಜನಜಾಗೃತಿ ಮತ್ತು ಮದ್ಯವರ್ಜನ ಶಿಬಿರವು ಇಂದು ಲಕ್ಷಾಂತರ ಕುಟುಂಬಗಳಿಗೆ ಬೆಳಕಾಗಿದೆ. ವ್ಯಸನದಿಂದ ವ್ಯಕ್ತಿ ಮಾತ್ರವಲ್ಲದೆ ಇಡೀ ಕುಟುಂಬವೇ ನಾಶವಾಗುತ್ತದೆ. ಪ್ರತಿಯೊಬ್ಬ ವ್ಯಸನಿಯು ಈ ಶಿಬಿರದ ಮೂಲಕ ನವಜೀವನ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು” ಎಂದು ಕರೆ ನೀಡಿದರು.

ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಯೋಜನಾಧಿಕಾರಿಯವರಾದ ಶ್ರೀ ಗಣೇಶಾಚಾರ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಮಾಹಿತಿ ನೀಡಿದರು. “35 ವರ್ಷದ ಹಿಂದೆ ಆರಂಭವಾದ ಈ ಕಾರ್ಯಕ್ರಮವು ಇಂದು ರಾಜ್ಯದ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದು, ಇದುವರೆಗೆ ಸುಮಾರು 1,50,000 ಕ್ಕೂ ಅಧಿಕ ನವಜೀವನ ಸದಸ್ಯರನ್ನು ಒಳಗೊಂಡಿದೆ. 7 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ವೈದ್ಯಕೀಯ ಚಿಕಿತ್ಸೆ, ಮಾನಸಿಕ ಸಮಾಲೋಚನೆ, ಯೋಗ, ಭಜನೆ ಮೂಲಕ ವ್ಯಸನಮುಕ್ತರನ್ನಾಗಿ ಮಾಡಲಾಗುತ್ತದೆ” ಎಂದು ತಿಳಿಸಿದರು.

ಮುಖ್ಯ ಅತಿಥಿಗಳ ಮಾತು:

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಉಡುಪಿ ಜಿಲ್ಲಾಧ್ಯಕ್ಷರಾದ ಶ್ರೀ ನೀರೆ ಕೃಷ್ಣಶೆಟ್ಟಿ ಅವರು ಮಾತನಾಡಿ, “ಧರ್ಮಸ್ಥಳದ ಈ ಜನಜಾಗೃತಿ ಕಾರ್ಯಕ್ರಮ ದೇಶಕ್ಕೇ ಮಾದರಿ. ಮದ್ಯಪಾನವು ಬಡತನಕ್ಕೆ ಮೂಲ ಕಾರಣ. ಇದನ್ನು ತ್ಯಜಿಸಿದರೆ ಮಾತ್ರ ಆರ್ಥಿಕವಾಗಿ, ಸಾಮಾಜಿಕವಾಗಿ ಕುಟುಂಬ ಸದೃಢವಾಗಲು ಸಾಧ್ಯ” ಎಂದರು.

ಹೆಬ್ರಿ ಆರಕ್ಷಕ ಠಾಣೆಯ ಎ.ಎಸ್.ಐ ಶ್ರೀ ಉಮೇಶ್ ಅವರು ಮಾತನಾಡಿ, “ವ್ಯಸನದಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಕುಟುಂಬ ಕಲಹ, ಜಗಳಗಳಿಗೆ ಇದೇ ಕಾರಣ. ಪೊಲೀಸ್ ಇಲಾಖೆಯು ಜನಜಾಗೃತಿ ವೇದಿಕೆಯ ಈ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುತ್ತದೆ” ಎಂದು ಭರವಸೆ ನೀಡಿದರು.

ಕೆಂಚೂರು ಶಾಲೆಯ ಅಧ್ಯಾಪಕರಾದ ಶ್ರೀ ಶಾಂತರಾಜ್ ಶೆಟ್ಟಿ ಅವರು ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅತಿ ಮುಖ್ಯ. ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ” ಎಂದರು.

2096ನೇ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಚೇರ್ಕಾಡಿ ವಲಯದ ಅಧ್ಯಕ್ಷರಾದ ಶ್ರೀ ಮನೋಜ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಶಿಬಿರಕ್ಕೆ ದಾಖಲಾದ ಸದಸ್ಯರ ವಿವರ ನೀಡಿ, ಶಿಬಿರದ ಯಶಸ್ಸಿಗೆ ಎಲ್ಲರ ಸಹಕಾರ ಕೋರಿದರು.

ವೇದಿಕೆಯಲ್ಲಿ ಗೌರವ ಉಪಸ್ಥಿತರಾಗಿ ಸಂತೆಕಟ್ಟೆಯ ಉದ್ಯಮಿಗಳಾದ ಶ್ರೀಮತಿ ಜನನಿ ದಿವಾಕರ್ ಶೆಟ್ಟಿ, ಜನಜಾಗೃತಿ ವೇದಿಕೆ ಒಕ್ಕೂಟದ ಅಧ್ಯಕ್ಷರುಗಳಾದ ಕಮಲಾಕ್ಷ ಹೆಬ್ಬಾರ್, ವಿಠಲ್ ಶೆಟ್ಟಿ, ರಾಜೇಶ್ ಪೂಜಾರಿ, ತಾಲೂಕು ಸಮಿತಿಯ ಸದಸ್ಯರಾದ ಜಗನ್ನಾಥ್ ಕುಲಾಲ್, ಮೋಹನ ದಾಸ್ ನಾಯಕ್, ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷರಾದ ನವೀನ್ ಕುಮಾರ್, ಹೆಬ್ರಿ ಬಂಟರ ಸಂಘದ ಅಧ್ಯಕ್ಷರಾದ ಹರ್ಷಾ ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಕಾರ್ಯಕ್ರಮವನ್ನು ತಾಲೂಕು ಯೋಜನಾಧಿಕಾರಿಯವರಾದ ಶ್ರೀಮತಿ ರೇಷ್ಮಾ ಅವರು ಸ್ವಾಗತಿಸಿ, ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, VLE ಗಳು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಅಧ್ಯಕ್ಷರುಗಳು ಹಾಗೂ ಸರ್ವ ಸದಸ್ಯರು, ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಮೇಲ್ವಿಚಾರಕರಾದ ಶ್ರೀ ಉದಯಕುಮಾರ್ ಉಪಸ್ಥಿತರಿದ್ದರು.

ಕೊನೆಯಲ್ಲಿ ಚೇರ್ಕಾಡಿ ವಲಯದ ಮೇಲ್ವಿಚಾರಕರಾದ ಶ್ರೀಮತಿ ಸುಮನ ಪೂಜಾರಿ ಅವರು ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *