ಆಳ್ವಾಸ್‌ನಿಂದ ಮಾನವೀಯ ಮೌಲ್ಯಗಳ ಶಿಕ್ಷಣ: ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ

ಬ್ರಹ್ಮಾವರ: ಇಂದಿನ ವ್ಯಾಪಾರೀಕರಣಗೊಂಡ ಶಿಕ್ಷಣ ವ್ಯವಸ್ಥೆಯ ನಡುವೆ ಆಳ್ವಾಸ್ ಶಿಕ್ಷಣ ಸಂಸ್ಥೆಯು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲ್ಪಿಸುವ ಅತ್ಯುತ್ತಮ ಕಾರ್ಯ ಮಾಡುತ್ತಿದೆ ಎಂದು ಕುಂದಾಪುರ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಅಭಿಪ್ರಾಯಪಟ್ಟರು.

ಜನಸೇವಾ ಟ್ರಸ್ಟ್‌ ಗಿಳಿಯಾರು ಹಾಗೂ ಎಸ್‌ಎಮ್‌ಎಸ್‌ ಡಿಗ್ರಿ ಕಾಲೇಜು, ಬ್ರಹ್ಮಾವರ ಇವುಗಳ ಸಂಯುಕ್ತ ಆಶ್ರಯದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನರಿಗಾಗಿ ಭಾನುವಾರ ಎಸ್‌ಎಮ್‌ಎಸ್‌ ಡಿಗ್ರಿ ಕಾಲೇಜಿನ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ‘ಉಚಿತ ಉದ್ಯೋಗ ಮಾರ್ಗದರ್ಶನ ಹಾಗೂ ಸಂದರ್ಶನ ತರಬೇತಿ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಉದ್ಯೋಗಾಕಾಂಕ್ಷಿಗಳು ತಮ್ಮ ಶಿಕ್ಷಣಕ್ಕೆ ತಕ್ಕಂತೆ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, “ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಈ ರೀತಿಯ ಕಾರ್ಯಾಗಾರಗಳು ಉತ್ತಮ ವೇದಿಕೆಯಾಗಿವೆ. ದೇಶದಲ್ಲಿರುವ ಸುಮಾರು 30 ಕೋಟಿ ಯುವಜನತೆಗೆ ಸರಿಯಾದ ಮಾರ್ಗದರ್ಶನ ಮತ್ತು ಉದ್ಯೋಗದ ಮಾಹಿತಿ ನೀಡಿದರೆ ಭಾರತವು ಪ್ರಪಂಚದಲ್ಲೇ ಪ್ರಥಮ ಸ್ಥಾನಕ್ಕೇರಲು ಸಾಧ್ಯ,” ಎಂದರು.

ಆತ್ಮವಿಶ್ವಾಸ ಹೆಚ್ಚಿಸುವ ತರಬೇತಿ:

ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ ಮೂಡುಬಿದಿರೆಯ ವ್ಯವಸ್ಥಾಪಕ ಟ್ರಸ್ಟಿ ಎಂ. ವಿವೇಕ್‌ ಆಳ್ವ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಪರಿಣಾಮಕಾರಿ ರೆಸ್ಯೂಮ್ ತಯಾರಿಕೆ ಹಾಗೂ ಸಂದರ್ಶನವನ್ನು ಆತ್ಮವಿಶ್ವಾಸದಿಂದ ಎದುರಿಸುವ ಕುರಿತು ಸಮಗ್ರ ಮಾರ್ಗದರ್ಶನ ನೀಡಿದರು. ಅಲ್ಲದೆ ‘ಆಳ್ವಾಸ್‌ ಪ್ರಗತಿ 2026’ ಬೃಹತ್‌ ಉದ್ಯೋಗ ಮೇಳ ಹಾಗೂ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಉದ್ಯೋಗಾವಕಾಶಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಪಾಲ್ಗೊಂಡ ಅಭ್ಯರ್ಥಿಗಳಿಗೆ ‘ಆಳ್ವಾಸ್‌ ಪ್ರಗತಿ’ ಉದ್ಯೋಗ ಮೇಳಕ್ಕೆ ಉಚಿತ ನೋಂದಣಿ ಮಾಡಿಕೊಳ್ಳಲಾಯಿತು ಹಾಗೂ ಮೇಳದಲ್ಲಿ ಭಾಗವಹಿಸಲು ವಿಶೇಷ ಬಸ್‌ ವ್ಯವಸ್ಥೆಯ ಕುರಿತು ವಿವರ ನೀಡಲಾಯಿತು.

ಜನಸೇವಾ ಟ್ರಸ್ಟ್‌ನ ವಸಂತ್‌ ಗಿಳಿಯಾರ್‌ ಪ್ರಸ್ತಾವಿಕವಾಗಿ ಮಾತನಾಡಿದರು. ವಿನಾಯಕ್‌ ಭಟ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕುಂದಾಪುರ ಹಾಗೂ ಬ್ರಹ್ಮಾವರ ತಾಲೂಕಿನ ನೂರಾರು ಉದ್ಯೋಗಾಕಾಂಕ್ಷಿಗಳು ಈ ಉಚಿತ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.

Leave a Reply

Your email address will not be published. Required fields are marked *