“ಜೆಜೆಎಂ ಜಿಲ್ಲೆಗೆ ವಿಫಲ ಯೋಜನೆ” ಶಾಸಕ ತಾಲೂಕು ಕೆಡಿಪಿ ಸಭೆಯಲ್ಲಿ ಯಶ್‌ಪಾಲ್‌ ಆಕ್ರೋಶ

ಜನತಾ ಸುದ್ಧಿ ಬ್ರಹ್ಮಾವರ

ಇಲ್ಲಿನ ತಾಲೂಕು ಪಂಚಾಯತ್‌ನ ತ್ರೈ ಮಾಸಿಕ ಕೆಡಿಪಿ ಸಭೆ ಚಾಂತಾರು ಗ್ರಾಮಪಂಚಾಯತ್‌ನ ಸಭಾಂಗಣದಲ್ಲಿ ಕುಂದಾಪುರ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಅಧ್ಯಕ್ಷತೆಯಲ್ಲಿ ಬುಧವಾರ ಜರಗಿತು. ಜೆಜೆಎಂ, ಶವಪರೀಕ್ಷೆಗೆ ವೈದ್ಯರ ಸಮಸ್ಯೆ, ಅಸಮರ್ಪಕ ಕೆಎಸ್‌ಆರ್‌ಟಿಸಿ ಓಡಾಟ ಸೇರಿದಂತೆ ಹತ್ತು ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಆರೂರು ಪಂಚಾಯತ್‌ನಲ್ಲಿ  ಮೂರನೇ ಪಕ್ಷದ ಪರಿಶೀಲನೆ ಆಗದೇ ಪಂಚಾಯತ್‌ ಜೆಜೆಎಮ್‌ ಹಸ್ತಾಂತರ ಮಾಡಿಕೊಳ್ಳಲಾಗಿದೆ. ಇದು ಸರಿಯಲ್ಲ. ಜೆಜೆಎಂ ಎನ್ನುವುದು ಉಡುಪಿ ಜಿಲ್ಲೆಗೆ ವಿಫಲ ಯೋಜನೆಯಾಗಿದೆ. ಸರಿಯಾದ ರೀತಿಯಲ್ಲಿ ಕೆಲಸಗಳು ನಡೆಯುತ್ತಿಲ್ಲ. ಒಂದು ಉತ್ತಮ ಯೋಜನೆಯನ್ನು ಕಳಪೆ ಮಾಡಲಾಗುತ್ತದೆ ಎಂದು ಶಾಸಕ ಯಶಪಾಲ್‌ ಸುವರ್ಣ ಆರೋಪಿಸಿದರು.

ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಎಷ್ಟೋ ಕಡೆ ಪೈಪ್‌ಲೈನ್‌ ಆಗಿದೆ ಆದರೆ ನೀರು ಮಾತ್ರ ಬಂದಿಲ್ಲ. ವಾರಾಹಿಯೋಜನೆಯಲ್ಲಿ ಕೆಲವು ಕಡೆಗಳಲ್ಲಿ ಅರಣ್ಯ ಇಲಾಖೆಯಿಂದ ಆಕ್ಷೇಪಗಳಿವೆ. ಈ ಆಕ್ಷೇಪ ತೆರವುಗೊಳ್ಳುವ ಮುನ್ನವೇ ಪೈಪ್‌ಲೈನ್‌ ಅಳವಡಿಸಲಾಗಿದೆ 90 ಶೇ. ಕಾಮಗಾರಿ ಪೂರ್ಣಗೊಂಡಿದೆ ಎಂದು ಹಣವನ್ನು ಬಿಡುಗಡೆಗೊಳಿಸಬಹುದಲ್ಲ! ಆ ಮೇಲೆ ಸಾರ್ವಜನಿಕರಿಗೆ ನಾವು ಉತ್ತರ ಕೊಡುವ ಪರಿಸ್ಥಿತಿ ಉಂಟಾಗಿದೆ ಎಂದರು.

ಕೆಎಸ್‌ಆರ್‌ಟಿಸಿಯ ಸಹಾಯಕ ಸಂಚಾರ ಅಧಿಕಾರಿ ರವೀಂದ್ರ ಈ ಮೊದಲು ನರ್ಮ್‌ನಲ್ಲಿ 36 ಬಸ್‌ಗಳಿದ್ದವು ಈಗ 26 ಬಸ್‌ಗಳಿವೆ ಎಂದು ಸಭೆಗೆ ಮಾಹಿತಿ ನೀಡಿದರು. ಈ ಸಂದರ್ಭ ಮಾತನಾಡಿದ ಯಶಪಾಲ್‌ ಸುವರ್ಣ, ಬಸ್‌ಗಳನ್ನು ಖಾಸಗಿ ಬಸ್‌ ಮಾಲೀಕರ ಉಪಯೋಗಕ್ಕೆ ಓಡಿಸುತ್ತಿದ್ದಿರಾ? ಎಂದು ಪ್ರಶ್ನಿಸಿದರು. ಶಾಲಾ ಮಕ್ಕಳಿಗೆ ಅನುಕೂಲವಾಗುವ ಸಮಯದಲ್ಲಿ ಒಂದೇ ಒಂದು ಬಸ್‌ ಇಲ್ಲ. ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಜಾಸ್ತಿ ಬಸ್‌ ಓಡಿಸಿ ಎಂದು ಎಷ್ಟು ಬಾರಿ ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಬೇಡಿಕೆ ಇರುವಲ್ಲಿ ಮೊದಲು ಪ್ರಾಯೋಗಿಕವಾಗಿ ಬಸ್‌ ಓಡಿಸಿ, ಆದಾಯವಿಲ್ಲ ಎಂತಾದರೆ ವಾಪಾಸು ತೆಗೆದರೆ ಸರಿ, ಮಟಪಾಡಿ ರೂಟ್‌ನಲ್ಲಿನ ಬಸ್ಸು ಶಾಲಾ ಮಕ್ಕಳ ಉಪಯೋಗಕ್ಕೆ ಸಿಗುತ್ತಿಲ್ಲ ಎಂದರು ಗ್ಯಾರೆಂಟಿ ಸಮಿತಿ ತಾಲೂಕು ಅಧ್ಯಕ್ಷೆ ಡಾ. ಸುನೀತಾ ಶೆಟ್ಟಿ ಮಾತನಾಡಿ, ಹೆಬ್ರಿಯಿಂದ ಉಡುಪಿಗೆ ಮೊದಲು ಬ್ರಹ್ಮಾವರ ಮೂಲಕ ಬಸ್‌ ಇತ್ತು ಅದನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. ಸಾಕಷ್ಟು ಆದಾಯ ನೀಡುತ್ತಿದ್ದ ರೂಟ್‌ಗಳನ್ನು ಖಾಸಗಿ ಒತ್ತಡಕ್ಕೆ ಬದಲಾಯಿಸಲಾಗುತ್ತಿದೆ. ಇದು ಸರಿಯಲ್ಲ ಜನರ ಅನುಕೂಲಕ್ಕೆ ಕೆಎಸ್‌ಠಾರ್‌ಟಿಸಿ ಇರುವುದು ಖಾಸಗಿಯವರ ಅನುಕೂಲಕ್ಕೆ ಅಲ್ಲ ಎಂದರು.

ಆರೋಗ್ಯ ಇಲಾಖೆಯ ಪರವಾಗಿ ಆಗಮಿಸಿದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮಹೇಶ್‌ ಐತಾಳ್‌ ಆರೋಗ್ಯ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಎಷ್ಟು ಡಯಾಲಿಸಿಸ್‌ಗೆ ಕಾಯುತ್ತಾ ಇದ್ದಾರೆ ಎಂದು ಪ್ರಶ್ನಿಸಿದರು. ದಿನಕ್ಕೆ ಮೂರು ಹಂತದಲ್ಲಿ ೯ ಜನಕ್ಕೆ ಡಯಾಲಿಸಿಸ್‌ ಮಾಡಲಾಗುತ್ತಿದೆ. ಸುಮಾರು ೭ ಜನ ಕಾಯುವಿಕೆಯಲ್ಲಿ ಇದ್ದಾರೆ. ಅವರಿಗೆ ಹೆಬ್ರಿ ಮೊದಲಾದೆಡೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ ಎಂದರು. ಬಡವರಿಗಾಗಿ ಈ ವ್ಯವಸ್ಥೆಯನ್ನು ತರಲಾಗಿದೆ. ಡಯಾಲಿಸಿಸ್‌ ಸಾಮರ್ಥ್ಯ ಹೆಚ್ಚಿಸಲು ನಿಮ್ಮ ಅಗತ್ಯತೆಗಳನ್ನು ಕೊಡಿ. ನಾನು ಮತ್ತು ಯಶ್‌ಪಾಲ್‌ ಈ ಬಗ್ಗೆ ಸರಕಾರದ ಮಟ್ಟದಲ್ಲಿ ಪ್ರಯತ್ನ ಮಾಡುವುದಾಗಿ ಶಾಸಕ ಕೊಡ್ಗಿ ತಿಳಿಸಿದರು.

ಶವಪರೀಕ್ಷೆ ಮಾಡುವುದಕ್ಕೆ ಸ್ಥಳೀಯ ವೈದ್ಯರು ಲಭ್ಯವಿರದ ಸಂದರ್ಭದಲ್ಲಿ ಶವಪರೀಕ್ಷೆ ವಿಳಂಬ ಮಾಡುವ ಬಗ್ಗೆ ಶಾಸಕ ಕೊಡ್ಗಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಡಾ. ಐತಾಳ್‌ ವಿಳಂಬ ಮಾಡುವುದಿಲ್ಲ. ಅಲಭ್ಯತೆ ಇದ್ದಾಗ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರುವ ವೈದ್ಯರು ಶವಪರೀಕ್ಷೆ ಮಾಡುತ್ತೇವೆ ಎಂದರು.  ಪೇತ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಶವಪರೀಕ್ಷೆ ವಿಳಂಬ ಮಾಡುತ್ತಿರುವ ಬಗ್ಗೆ ಚರ್ಚೆಯಾಯಿತು. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರುವಂತೆ ಸೂಚಿಸಲಾಯಿತು.

ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಯ ನೂತನ ಸರ್ವಿಸ್‌ ರಸ್ತೆ ವಾಹನ ಪಾರ್ಕಿಂಗ್‌ ಸ್ಥಳವಾಗಿರುವ ಬಗ್ಗೆ ಚರ್ಚಿಸಲಾಯಿತು. ಬ್ರಹ್ಮಾವರ ಠಾಣಾ ಉಪನಿರೀಕ್ಷಕ ಅಶೋಕ್‌ ಅಲ್ಲಿ ಸಿಬ್ಬಂದಿಯನ್ನು ನೇಮಕಗೊಳಿಸುವುದಾಗಿ ತಿಳಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ಗ್ರೆಡ್‌ 2 ತಹಶೀಲ್ದಾರ್‌ ಅಶೋಕ್‌ ಭಟ್‌, ತಾಲೂಕು ಪಂಚಾಯತ್‌ ಆಡಳಿತಾಧಿಕಾರಿ ಕ್ಷಮಾಪಾಟೀಲ್‌, ತಾಲ್ಲೂಕು ಇಓ ಎಚ್‌.ವಿ ಇಬ್ರಾಹಿಂಪುರ ಉಪಸ್ಥಿತರಿದ್ದರು.

ಸಹಾಯಕ ನಿರ್ದೇಶಕ ಮಹೇಶ್‌ ಕೆ. ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *