*ಬೋಧನೆಯ ಜೊತೆ ಪ್ರತಿಭೆಯ ಬೆಳ್ಳಿ ಬೆಳಕು — ರಾಜ್ಯಮಟ್ಟದಲ್ಲಿ ಮಿಂಚಿದ ಗುರುಪ್ರಸಾದ್
ಶಾಲೆಯ ಶಿಕ್ಷಕರು ಕೇವಲ ಪಾಠ ಬೋಧನೆಗೆ ಮಾತ್ರ ಸೀಮಿತವಾಗದೆ, ಸಮಾಜದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿಯೂ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದಾಗ ವಿದ್ಯಾರ್ಥಿಗಳಿಗೆ ಅದೊಂದು ಮಹತ್ತರ ಪ್ರೇರಣೆಯಾಗುತ್ತದೆ. ಅಂತಹ ಅಪೂರ್ವ ಸಾಧನೆಯನ್ನು ಮಾಡಿ ಜಿಲ್ಲೆಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಎತ್ತಿಹಿಡಿದವರು ಪಿ.ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿತ್ತೂರು ಇಲ್ಲಿಯ ಕ್ರಿಯಾಶೀಲ ಹಾಗೂ ಬಹುಮುಖ ಪ್ರತಿಭೆಯ ಶಿಕ್ಷಕರಾದ ಶ್ರೀ ಗುರುಪ್ರಸಾದ್ ಸರ್.ಬೆಂಗಳೂರು ನಗರದ ಪ್ರತಿಷ್ಠಿತ ಕಂಠೀರವ ಸ್ಟೇಡಿಯಂನಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಜಾನಪದ ನೃತ್ಯ ವಿಭಾಗದಲ್ಲಿ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಜಾನಪದ ಕಲೆಯ ಸೊಗಡನ್ನು ಜೀವಂತವಾಗಿರಿಸಿ, ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ರಾಜ್ಯದ ಗಮನ ಸೆಳೆದಿರುವುದು ಅಭಿನಂದನೀಯ ಸಾಧನೆ.ಇದೇ ವೇಳೆ ಕಿರು ನಾಟಕ ಸ್ಪರ್ಧೆಯಲ್ಲಿಯೂ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಗಳಿಸಿರುವುದು ಅವರ ಕಲಾತ್ಮಕ ಸಾಮರ್ಥ್ಯ ಮತ್ತು ಸಾಂಸ್ಕೃತಿಕ ಬದ್ಧತೆಯ ಪ್ರತೀಕವಾಗಿದೆ. ಶಿಕ್ಷಕರಾಗಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೌಲ್ಯಗಳನ್ನು ಬಿತ್ತುವ ಜೊತೆಗೆ, ಕಲೆ-ಸಂಸ್ಕೃತಿಯ ವೇದಿಕೆಯಲ್ಲಿ ಸಾಧನೆಯ ಶಿಖರ ಏರಿರುವುದು ನಿಜಕ್ಕೂ ಶ್ಲಾಘನೀಯ.ಶ್ರೀ ಗುರುಪ್ರಸಾದ್ ಸರ್ ಅವರ ಈ ಸಾಧನೆ ಕೇವಲ ಅವರ ವೈಯಕ್ತಿಕ ಗೆಲುವಲ್ಲ; ಅದು ಶಾಲೆಯ ಗೌರವ, ಜಿಲ್ಲೆಯ ಹೆಮ್ಮೆ ಮತ್ತು ಶಿಕ್ಷಕ ವೃಂದದ ಸಾರ್ಥಕತೆಯ ಪ್ರತಿಬಿಂಬವಾಗಿದೆ. ಅವರ ಸಾಧನೆ ಇನ್ನಷ್ಟು ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿ ಎಂಬುದು ಎಲ್ಲರ ಆಶಯ.ತಮ್ಮ ಈ ಅಪೂರ್ವ ಸಾಧನೆಗೆ ಶ್ರೀ ಗುರುಪ್ರಸಾದ್ ಸರ್ ಅವರಿಗೆ ಹೃದಯಾಂತರಾಳದ ಅಭಿನಂದನೆಗಳು ಹಾಗೂ ರಾಷ್ಟ್ರಮಟ್ಟದಲ್ಲಿಯೂ ಇನ್ನಷ್ಟು ಯಶಸ್ಸು ದೊರೆಯಲಿ .

