ಸಂಜಯ ಗಾಂಧಿ ಇಂಗ್ಲಿಷ್ ಮೀಡಿಯಂ ಶಾಲೆ ಅಂಪಾರು – ಸಂಪ್ರದಾಯದ ಸೊಬಗಿನಲ್ಲಿ ನೂತನ ಶೈಕ್ಷಣಿಕ ವರ್ಷದ ಆರಂಭ
ಸಂಜಯ ಗಾಂಧಿ ಇಂಗ್ಲಿಷ್ ಮೀಡಿಯಂ ಶಾಲೆ ಅಂಪಾರು – ಸಂಪ್ರದಾಯದ ಸೊಬಗಿನಲ್ಲಿ ನೂತನ ಶೈಕ್ಷಣಿಕ ವರ್ಷದ ಆರಂಭ ಶಿಕ್ಷಣದ ಪವಿತ್ರ ಪಯಣಕ್ಕೆ ಸಂಪ್ರದಾಯ ಮತ್ತು ಸಂಸ್ಕೃತಿಯ ಸೊಬಗು ಸೇರಿಸಿ, ಅಂಪಾರಿನ ಸಂಜಯ ಗಾಂಧಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನೂತನ ಶೈಕ್ಷಣಿಕ ವರ್ಷದ ಆರಂಭ ಹಾಗೂ ಅಕ್ಷರಾಭ್ಯಾಸ ಕಾರ್ಯಕ್ರಮಗಳು ಅತ್ಯಂತ ವೈಭವ, ಭಕ್ತಿ ಮತ್ತು ಸಂಭ್ರಮದ ವಾತಾವರಣದಲ್ಲಿ ನೆರವೇರಿದವು.ಜೂನ್ 1ರಂದು ಶಾಲಾ ಪುನರಾರಂಭದ ಅಂಗವಾಗಿ ನುಕ್ಯಾಡಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಗಣಹೋಮ ನೆರವೇರಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾರ್ಥಿಸಲಾಯಿತು. ನಂತರ ಶಾಲಾ ಆವರಣದಲ್ಲಿ ಶ್ರೀ ಶೃಂಗೇರಿ ಪೀಠದ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳಿಂದ ಕೊಡ ಮಾಡಿದ ಶ್ರೀ ಶಾರದಾಂಬೆಯ ಮೂರ್ತಿಗೆ ದೀಪ ಪ್ರಜ್ವಲನೆ ಮಾಡುವ ಮೂಲಕ ನೂತನ ಶೈಕ್ಷಣಿಕ ವರ್ಷದ ಅಧಿಕೃತ ಉದ್ಘಾಟನೆ ನಡೆಯಿತು.ಕಾರ್ಯಕ್ರಮದಲ್ಲಿ ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ, ಕಾರ್ಯದರ್ಶಿ ಶ್ರೀ ನವೀನ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ಶ್ರೀ ಕಿರಣ್ ಹೆಗ್ಡೆ ಹಾಗೂ ಶ್ರೀ ಉಮೇಶ್ ಕೊಠಾರಿ, ಸಂಜಯ ಗಾಂಧಿ ಫಂಡ್ ಸಮಿತಿಯ ಅಧ್ಯಕ್ಷೆ ಶ್ರೀಮತಿ ಶಾರದಾ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಹೊಸ ಶೈಕ್ಷಣಿಕ ವರ್ಷ ಯಶಸ್ವಿಯಾಗಲೆಂದು ಆಶೀರ್ವದಿಸಿದರು.ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಶ್ರೀಮತಿ ಚೈತ್ರಾ ಯಡಿಯಾಳ ಹಾಗೂ ಶಿಕ್ಷಕ ವೃಂದವು ವಿದ್ಯಾರ್ಥಿಗಳನ್ನು ಆರತಿ ಬೆಳಗಿ, ತಿಲಕ ಇಟ್ಟು, ಪುಷ್ಪಾರ್ಚನೆ ಮಾಡುವ ಮೂಲಕ ಹೃತ್ಪೂರ್ವಕವಾಗಿ ಸ್ವಾಗತಿಸಿ, ಶಾಲಾ ಆವರಣವನ್ನು ಹಬ್ಬದ ವಾತಾವರಣವನ್ನಾಗಿ ಪರಿವರ್ತಿಸಿದರು.ಇದರ ಮುಂದುವರಿದ ಭಾಗವಾಗಿ ಜೂನ್ 3ರಂದು ಶಾಲೆಯ ಪುಟಾಣಿ ಕಂದಮ್ಮಗಳಿಗಾಗಿ ಅಕ್ಷರಾಭ್ಯಾಸ ಮತ್ತು ವಿದ್ಯಾರಂಭ ಮಹೋತ್ಸವ ಅತ್ಯಂತ ಸಾಂಪ್ರದಾಯಿಕ ಹಾಗೂ ವಿಶಿಷ್ಟ ರೀತಿಯಲ್ಲಿ ಆಯೋಜಿಸಲಾಯಿತು. ಪುರೋಹಿತರಾದ ಅಂಪಾರು ಶ್ರೀ ಸುಬ್ರಹ್ಮಣ್ಯ ಅಡಿಗರು ಅವರ ಮಾರ್ಗದರ್ಶನದಲ್ಲಿ ಶಾಸ್ತ್ರೋಕ್ತವಾಗಿ ನಡೆದ ಈ ಕಾರ್ಯಕ್ರಮದಲ್ಲಿ, ಅರಿಶಿನ ಕೊಂಬಿನ ಸಹಾಯದಿಂದ ಅಕ್ಕಿಯ ಮೇಲೆ ಪವಿತ್ರ ಅಕ್ಷರಗಳನ್ನು ಬರೆಯುವ ಮೂಲಕ ಪುಟಾಣಿಗಳಿಗೆ ವಿದ್ಯಾರಂಭ ಮಾಡಿಸಲಾಯಿತು. ಈ ಎರಡೂ ದಿನ ಮಕ್ಕಳ ಪೋಷಕರು ಅತ್ಯಂತ ಲವಲವಿಕೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸಿದರು ಶೃಂಗೇರಿಯ ಶ್ರೀ ಶ್ರೀ ವಿಧುಶೇಖರ್ ಭಾರತೀ ಸನ್ನಿದಾನಾಂಗಳ ಅನುಗ್ರಹದೊಂದಿಗೆ ಶ್ರೀ ಶಾರದಾಂಬೆ ಹಾಗೂ ಶ್ರೀ ಗಣಪತಿಯ ಕೃಪಾಶೀರ್ವಾದದೊಂದಿಗೆ ನಡೆದ ಈ ಕಾರ್ಯಕ್ರಮವು ಪಾಲಕರು ಮತ್ತು ವಿದ್ಯಾರ್ಥಿಗಳಲ್ಲಿ ಅಪಾರ ಸಂತಸ ಮೂಡಿಸಿತು. ಸಿಹಿತಿಂಡಿಗಳ ವಿತರಣೆ, ಧಾರ್ಮಿಕ ಸಂಪ್ರದಾಯಗಳ ನಡುವೆ ಪುಟಾಣಿ ಮಕ್ಕಳ ವಿದ್ಯಾಜೀವನಕ್ಕೆ ಶುಭಾರಂಭ ನೀಡಲಾಯಿತು.ಶಿಕ್ಷಣ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಸುಂದರ ಸಂಗಮವಾಗಿ ನಡೆದ ಈ ಎರಡು ದಿನಗಳ ಕಾರ್ಯಕ್ರಮಗಳು ಪಾಲಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದು, ಶಾಲೆಯು ಮತ್ತೊಮ್ಮೆ ತನ್ನ ವಿಶಿಷ್ಟ ಶೈಕ್ಷಣಿಕ ಮೌಲ್ಯಗಳನ್ನು ಅನಾವರಣಗೊಳಿಸಿತು.

